ನಾಡಿನ ಅಕ್ಷರಯೋಗಿ. ಉತ್ತರ ಕರ್ನಾಟಕದ ಶಿಕ್ಷಣ ದಾರಿದ್ರ್ಯವನ್ನು ತೊಲಗಿಸಿ ಶೈಕ್ಷಣಿಕ ಕ್ರಾಂತಿ ಮಾಡಿದ ಮಹಾನ್ಸುಧಾರಕ. ಅರಟಾಳ ರುದ್ರಗೌಡರು.
ನಾಡಿನ ಅಕ್ಷರಯೋಗಿ.
ಉತ್ತರ ಕರ್ನಾಟಕದ ಶಿಕ್ಷಣ ದಾರಿದ್ರ್ಯವನ್ನು ತೊಲಗಿಸಿ ಶೈಕ್ಷಣಿಕ ಕ್ರಾಂತಿ ಮಾಡಿದ ಮಹಾನ್ಸುಧಾರಕ.
ಹೆಸರು ಅರಟಾಳ ರುದ್ರಗೌಡರು.
ಅರಟಾಳ ರುದ್ರಗೌಡರು ಧಾರವಾಡದಲ್ಲಿ ಕರ್ನಾಟಕ ಕಾಲೇಜು ಸ್ಥಾಪನೆ ಮಾಡಿದವರು. ಧಾರವಾಡ ಶಿಕ್ಷಣ ಕಾಶಿ ಎಂದು ಕರೆಸಿಕೊಳ್ಳುವಲ್ಲಿ ಅರಟಾಳ ರುದ್ರಗೌಡರ ಕೊಡುಗೆ ಅಪಾರವಾಗಿದೆ. ಅಷ್ಟೇ ಅಲ್ಲ ಉತ್ತರಕರ್ನಾಟಕ ಶಿಕ್ಷಣ ಸಂಸ್ಥೆಗಳ ಕೊರತೆಯಿಂದ ನಲುಗುತಿದ್ದಾಗ ಆ ಕೊರತೆಯನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಅರಟಾಳ ರುದ್ರಗೌಡರು. ಹೇಳಬೇಕೆಂದ್ರೆ ೧೯೧೦ರವರೆಗೆ ಉತ್ತರ ಕರ್ನಾಟಕದಲ್ಲಿ ಒಂದೇ ಒಂದು ಕಾಲೇಜು ಇರಲಿಲ್ಲ. ಇದನ್ನರಿತ ಅರಟಾಳ ರುದ್ರಗೌಡರು ಆಗಿನ ಬ್ರಿಟಿಷ್ಕಲೆಕ್ಟರುಗಳಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಆಗ ಬ್ರಿಟಿಷ್ಕಲೆಕ್ಟರ್ಗಳು ಒಂದು ಷರತ್ತು ಹಾಕಿದ್ದರು. ಶಿಕ್ಷಣ ಸಂಸ್ಥೆ ಆರಂಭಿಸಲು ಮೂರು ಲಕ್ಷ ರೂಪಾಯಿ ಠೇವಣಿ ಇಡಬೇಕು ಅನ್ನೋದೆ ಆ ಷರತ್ತು. ಷರತ್ತನ್ನು ಸವಾಲಾಗಿ ಸ್ವೀಕರಿಸಿದ ಅರಟಾಳ ರುದ್ರಗೌಡರು ೧.೭೦ ಲಕ್ಷ ರೂಪಾಯಿ ಸಂಗ್ರಹಿಸಿ ಕಾಲೇಜನ್ನ ಆರಂಭ ಮಾಡಿದ್ದರು.
ಧಾರವಾಡದಲ್ಲಿ ಜೂನ್೨೦, ೧೯೧೭ರಲ್ಲಿ ಕರ್ನಾಟಕ ಕಾಲೇಜಿನ ಸ್ಥಾಪನೆ, ಉತ್ತರ ಕರ್ನಾಟಕದಲ್ಲಿ ಕರ್ನಾಟಕ ಸೆಂಟ್ರಲ್ಕೋಆಪರೇಟಿವ್ ಬ್ಯಾಂಕ್ಸ್ಥಾಪನೆ, ಬೆಳಗಾವಿಯಲ್ಲಿನ ಕೆ.ಎಲ್.ಇ ಸಂಸ್ಥೆ ಪ್ರಾರಂಭಕ್ಕೆ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿದರು. ಕೆ.ಎಲ್.ಇ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಅಲ್ಲದೆ ಗದಗಿನಲ್ಲಿ ತೋಂಟದಾರ್ಯ ಸಂಸ್ಕ್ರತ ಶಾಲೆ, 1883 ರಲ್ಲಿ ಧಾರವಾಡದಲ್ಲಿ ಲಿಂಗಾಯತ ಎಜುಕೇಶನ್ ಸಂಸ್ಥೆ, ಮಹಾರಾಷ್ಟ್ರದ ಕೋಲ್ಹಾಪುರ ಲಿಂಗಾಯತ ಎಜುಕೇಶನ್ ಸಂಸ್ಥೆ, ಮುಂಬೈನಲ್ಲಿ ಲಿಂಗಾಯತ ಮಠಕ್ಕೆ ನಿಧಿ ಸಂಗ್ರಹಣೆ, ಹಾವೇರಿಯ ಹಿರೆಕೇರೂರಿನಲ್ಲಿ ಇಂಗ್ಲಿಷ್ ಶಾಲೆ, ಬೆಳಗಾವಿಯ ಸರಕಾರಿ ಆಸ್ಪತ್ರೆಯಲ್ಲಿ ನರ್ಸಿಂಗ್ ತರಬೇತಿ ಕೆಂದ್ರ, ಹುಬ್ಬಳ್ಳಿಯಲ್ಲಿ ಲಿಂಗಾಯತ ವಿಲಾಸ ಮುದ್ರಣಾಲಯ, ಇವೆಲ್ಲವೂ ಅರಟಾಳ ರುದ್ರಗೌಡ್ರು ಕೊಡುಗೆಗಳಾಗಿವೆ.
ಇಂಥ ಶಿಕ್ಷಣ ಪ್ರೇಮಿ, ಶಿಕ್ಷಣ ಸುಧಾರಕ ಅರಟಾಳ ರುದ್ರಗೌಡರು ಜನಿಸಿದ್ದು ಮಾರ್ಚ್೨೨ ೧೮೫೧ರಲ್ಲಿ. ಹುಟ್ಟೂರು ಕುಂದಗೋಳ ತಾಲೂಕಿನ ಅರಟಾಳ ಗ್ರಾಮ.
ನಮ್ಮ ನಾಡಿಗೆ ಕೊಡುಗೆ ಕೊಟ್ಟ ಮಹನೀಯರನ್ನು ಸ್ಮರಿಸುವುದು ನಾಡಿನ ಎಲ್ಲ ಜನರ ಕರ್ತವ್ಯವೂ ಹೌದು.
ಜವಾಬ್ದಾರಿಯೂ ಹೌದು.
ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು
ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ,ಹರಕ್ಷೇತ್ರ ಹರಿಹರ.
ದೆಹಲಿಯ ಉಪರಾಷ್ಟ್ರಪತಿಯವರ ನಿವಾಸದಲ್ಲಿ ಭೇಟಿ
ದಿನಾಂಕ 14-03-2021ರಂದು ಉಪರಾಷ್ಟ್ರಪತಿ ಶ್ರೀ ವೆಂಕಯ್ಯನಾಯ್ಡು ಅವರನ್ನು ದೆಹಲಿಯ ಉಪರಾಷ್ಟ್ರಪತಿಯವರ ನಿವಾಸದಲ್ಲಿ ಭೇಟಿ ಆದೆವು.ಅವರ ಇಂದಿನ ಭೇಟಿ ಬಹಳ ಪ್ರಫುಲ್ಲದಾಯಕವಾಗಿತ್ತು. ನಮ್ಮನ್ನ ನೋಡಿದ ಕೂಡಲೇ ಅವರು ಬಹಳ ಖುಷಿ ಪಟ್ಟರು.ಕೆಲವು ವರ್ಷಗಳ ಹಿಂದೆ ಅವರನ್ನು ಬೇಟಿಯಾದ ಸಂಧರ್ಭವನ್ನು ಮತ್ತು ಕೆಲವು ದಿನಗಳ ಹಿಂದೆ ನಿಮ್ಮ ಜೊತೆ ಮಾತನಾಡಿರುವುದನ್ನು ಮೆಲುಕು ಹಾಕಿದರು.ನೀವು ಯೋಗ ಕ್ಷೇತ್ರದಲ್ಲಿ ಮಾಡಿರುವ ಸಾಧನೆಸಿದ್ಧಿ ಹಾಗೂ ಹರಿಹರದ ಪಂಚಮಸಾಲಿ ಜಗದ್ಗುರು ಪೀಠದ ಪೀಠಾಧ್ಯಕ್ಷರಾಗಿದ್ದನ್ನು ಬಗ್ಗೆ ಕೇಳಿದ್ದೇನೆ.ತುಂಬಾ ಸಂತಸ ಅಂತ ಪ್ರೀತಿಯಿಂದ ಮಾತಾಡಿದರು. ಯೋಗ, ಆಧ್ಯಾತ್ಮದ ಬಗ್ಗೆ ಉಪರಾಷ್ಟ್ರಪತಿಗಳಿಗೆ ಅತೀವ ಜ್ಞಾನವಿದೆ. ಆ ಕುರಿತು ನಮ್ಮ ಜೊತೆ ವಿಸ್ತೃತವಾಗಿ ಚರ್ಚಿಸಿದರು. ಜೂನ್ ೨೧ಕ್ಕೆ ಜಗತ್ತಿನೆಲ್ಲೆಡೆ ಆಚರಿಸುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕುರಿತೂ ಮಾತನಾಡಿದರು. ನಮ್ಮೊಂದಿಗೆ ನವದೆಹಲಿ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆಯ ನಿರ್ದೇಶಕರಾದ ಶ್ರೀ ಡಾ.ಈಶ್ವರ ಬಸವರೆಡ್ಡಿ ಉಪಸ್ಥಿತರಿದ್ದರು.
ಉಪರಾಷ್ಟ್ರಪತಿ ಶ್ರೀ ವೆಂಕಯ್ಯನಾಯ್ಡು ಅವರು ಸರಳ- ಸಜ್ಜನರು. ರಾಜಕೀಯ ಮುತ್ಸದ್ಧಿಗಳು. ನಮ್ಮ ಪಕ್ಕದ ಆಂಧ್ರಪ್ರದೇಶದವರು. ಕನ್ನಡಿಗರನ್ನು ಕಂಡರೆ ಅಪಾರ ಪ್ರೀತಿ ಗೌರವ. ಅವರಿಗೆ ಹರಿಹರಾದಿ ಶರಣರು ಹೆಚ್ಚಿನ ಆರೋಗ್ಯ ಭಾಗ್ಯ ನೀಡಲಿ ಎಂದು ನಾವು ಪ್ರಾರ್ಥಿಸುತ್ತೇವೆ.
ಜಗದ್ಗುರು ಶ್ರೀ ಶ್ರೀ ಶ್ರೀ ವಚನಾನಂದ ಮಹಾಸ್ವಾಮಿಗಳು
ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ,ಹರಕ್ಷೇತ್ರ ಹರಿಹರ.
ಕೆಳದಿ ರಾಣಿ ಚೆನ್ನಮ್ಮ(1647-1697)
ಕೆಳದಿ ರಾಣಿ ಚೆನ್ನಮ್ಮ(1647-1697)
ಆಕೆ ಕನ್ನಡದ ಹೆಣ್ಣುಹುಲಿ.
ಆಕೆ ಎಂದರೆ ಬೇರೆ ಯಾರೂ ಅಲ್ಲ. ಕೆಳದಿಯ ರಾಣಿ ಚೆನ್ನಮ್ಮಾಜಿ. ಶತ್ರು ಪಾಳಯಕ್ಕೆ ಬೆಂಕಿಚಂಡಿನಂತಿದ್ದ, ವೀರಾಧಿವೀರರನ್ನೇ ಯುದ್ಧರಂಗದಲ್ಲಿ ಮಂಡಿ ಊರುವಂತೆ ಮಾಡಿದ, ಔರಂಗಜೇಬನಂಥ ಸುಲ್ತಾನನನ್ನೇ ಪತರಗುಟ್ಟುವಂತೆ ಮಾಡಿ ಪ್ರಾಣಭಿಕ್ಷೆ ನೀಡಿದ ವೀರವನಿತೆ ರಾಣಿ ಚೆನ್ನಮ್ಮಾಜಿ. ಆಕೆ ಕೇವಲ ಕೆಳದಿಯ ರಾಣಿ ಮಾತ್ರವಲ್ಲ. ಹದಿನೇಳನೇ ಶತಮಾನದಲ್ಲೇ ಶತ್ರು ಪಾಳಯಕ್ಕೆ ಸಿಂಹಸ್ವಪ್ನವಾಗಿದ್ದ ದೇಶದ ಸಾಕ್ಷಾತ್ ದುರ್ಗೆ.
ನಮಗೆ ಮೊದಲಿನಿಂದಲೂ ಕೆಳದಿ ಅಂದ್ರೆ ಅಚ್ಚುಮೆಚ್ಚು. ಅದೆಂಥದೋ ರೋಮಾಂಚನ. ನಮ್ಮ ಗುರುಗಳು ಕೆಳದಿ ಚೆನ್ನಮ್ಮನ ಕಥೆ ಹೇಳಿದಾಗಲೆಲ್ಲಾ ನಮ್ಮೊಳಗೂ ಅವಳ ಕೆಚ್ಚಿನ ಕಿಚ್ಚು, ಪರಾಕ್ರಮ ಆವರಿಸಿಕೊಳ್ಳುತ್ತಿತ್ತು. ಇತ್ತೀಚೆಗೆ ನಮಗ್ಯಾಕೋ ಕೆಳದಿ ಬಹುವಾಗಿ ಕಾಡತೊಡಗಿತು. ಹೋಗಲೇಬೇಕು, ಆ ವೀರವನಿತೆ ಮೆಟ್ಟಿದ ಉಸಿರಾಡಿದ ನೆಲವನ್ನ ಸ್ಪರ್ಶಿಸಿ ಬರಬೇಕು ಅನ್ನೋ ಹಂಬಲ ದಿನೇದಿನೇ ಹೆಚ್ಚಾಗತೊಡಗಿತು. ನಾವು, ಆನಂದಪುರದ ಜಗದ್ಗುರು ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ,ಚಿಕ್ಕಮಗಳೂರಿನ ಬಸವತತ್ತ್ವಪೀಠದ ಬಸವ ಮರುಳಸಿದ್ದ ಸ್ವಾಮೀಜಿ ಮೂವರೂ ಕೆಳದಿಯಲ್ಲಿ ಬೀಡುಬಿಟ್ಟೆವು. ಆ ಸುಖವೇ ಬೇರೆ. ಆ ನೆಲದ ಅಣುಅಣುವಿನಲ್ಲೂ ರಾಣಿ ಚೆನ್ನಮ್ಮಾಜೀಯ ವೀರಪೌರುಷ ನಿಗಿ ನಿಗಿ ಅನ್ನುತ್ತಿದೆ. ಆಕೆ ನಡೆದಾಡಿದ, ಹೋರಾಡಿದ, ಶತ್ರುಗಳಿಗೆ ರಣಚೆಂಡಿಯಾಗಿ ರುಂಡಮುಂಡ ಚೆಂಡಾಡಿದ ಕಥೆಗಳನ್ನು ಡಾ. ವೆಂಕಟೇಶ್ ಜೋಯಿಷ್ ಹೇಳುತ್ತಿದ್ದರೆ ನಮ್ಮ ನರನಾಡಿಗಳು ಸೆಟೆದು ನಿಲ್ಲುತ್ತಿದ್ದವು.
ಕೆಳದಿಯ ರಾಣಿ ಚೆನ್ನಮ್ಮಾಜಿ ಕ್ರಿಸ್ತಶಕ ೧೬೭೨ರಿಂದ ೧೬೯೭ರವರೆಗೆ ಅಂದ್ರೆ ಬರೋಬ್ಬರಿ ೨೫ ವರ್ಷ ಆರು ತಿಂಗಳು ಇಪ್ಪತ್ತು ದಿನಗಳ ಕಾಲ ಕೆಳದಿಯನ್ನು ಆಳುತ್ತಾಳೆ. ಆ ಕಾಲಕ್ಕೆ ಒಬ್ಬ ಹೆಣ್ಣು ಮಗಳು ೨೫ ವರ್ಷ ರಾಜ್ಯವನ್ನಾಳುತ್ತಾಳೆ ಅಂದ್ರೆ ಆಕೆಯಲ್ಲಿ ಎಂಥ ಪೌರುಷವಿತ್ತು, ಹಠ ಇತ್ತು, ರಾಜತಾಂತ್ರಿಕತೆ ಇತ್ತು, ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡದ ಕಿಚ್ಚಿತ್ತು ಅಂತ ಊಹಿಸಿಕೊಳ್ಳಿ. ಶತ್ರುಗಳು ಶತ ದಿಕ್ಕಗಳಿಂದ ಮುಗಿಬಿದ್ದಾಗಲೂ ಅವರನ್ನು ಸೋಲಿಸಿ ಇಕ್ಕೇರಿ ಸಂಸ್ಥಾನವನ್ನು ಸಂರಕ್ಷಿಸಿದ ರಣಚತುರೆ ಕೆಳದಿ ಚೆನ್ನಮ್ಮಾಜಿ.
ಕೆಳದಿಯ ರಾಣಿ ಚೆನ್ನಮ್ಮಾಜೀಯ ಬಗ್ಗೆ ತಿಳಿಯಬೇಕೆಂದರೆ ಲಿಂಗಣ್ಣ ಕವಿಯ ಕೆಳದಿ ನೃಪವಿಜಯ ಮತ್ತು ಆ ಕಾಲಘಟ್ಟದ ಇತರೆ ಇತಿಹಾಸಕಾರರು ಬರೆದ ಗ್ರಂಥಗಳನ್ನು ಓದಬೇಕು. ಆಕೆಯ ತಂದೆ ಕೋಟಿಪುರ ಸಿದ್ದಪ್ಪ. ಸಿದ್ದಪ್ಪನವರು ಮಗಳಿಗೆ ಬಾಲ್ಯದಲ್ಲೇ ಶಸ್ತ್ರ ಶಾಸ್ತ್ರ ವಿದ್ಯೆ ಕೊಡಿಸಿದ್ದರು. ಮುಂದೆ ವಯಸ್ಸಿಗೆ ಬಂದಂತೆ ಚೆನ್ನಮ್ಮಾಜಿಯನ್ನು ಸೋಮಶೇಖರನಾಯಕನಿಗೆ ಕೊಟ್ಟು ಮದುವೆ ಮಾಡಲಾಗುತ್ತದೆ. ಈ ಸೋಮಶೇಖರ ನಾಯಕ ಶಿವಪ್ಪನಾಯಕನ ಪುತ್ರ. ಶಿವಪ್ಪ ನಾಯಕ ಸಾಮಾಜಿಕ ಹರಿಕಾರನೆಂದೇ ಹೇಳಬಹುದು. ಈತ ರೂಪಿಸಿದ ಕಂದಾಯ ವ್ಯವಸ್ಥೆ ಅತ್ತುತ್ತಮವಾದ ವ್ಯವಸ್ಥೆಯಾಗಿತ್ತು. ಆಗಿನ ಕಂದಾಯ ವ್ಯವಸ್ಥೆಗೆ ಸಿಸ್ತು ಅಂತಾನೆ ಹೆಸರಿತ್ತು. ಅದು ಎಷ್ಟು ಪ್ರಚಲಿತವಾಗಿತ್ತು ಎಂದ್ರೆ ಶಿವಪ್ಪ ಸಿಸ್ತು ಅಂತಾನೆ ಖ್ಯಾತಿ ಪಡೆದಿತ್ತು.
ಸೋಮಶೇಖರ ನಾಯಕ ಅತ್ಯಂತ ಧಾರ್ಮಿಕ ವ್ಯಕ್ತಿಯಾಗಿದ್ದ. ಹಲವು ವರ್ಷಗಳ ಕಾಲ ಮದುವೆ ಆಗದೇ ಉಳಿದಿದ್ದರೂ ಕೊನೆಗೆ ರೂಪವತಿಯೂ ಚತುರಮತಿಯೂ ಆದ ಚೆನ್ನಮ್ಮಾಜಿಯನ್ನು ಅತ್ಯಂತ ಇಷ್ಟಪಟ್ಟು ಮದುವೆಯಾಗುತ್ತಾನೆ. ಮದುವೆಯಾದ ಮೇಲೆ ಶಿವಪ್ಪನಾಯಕನಿಂದ ಚೆನ್ನಮ್ಮಾಜಿ ಆಡಳಿತದ ಅನುಭವವನ್ನು ಪಡೆದುಕೊಳ್ಳುತ್ತಾಳೆ. ಸೂಕ್ತ ಸಮಯದಲ್ಲಿ ಪತಿಗೆ ಸಲಹೆ ಸೂಚನೆಗಳನ್ನು ನೀಡತೊಡಗುತ್ತಾಳೆ.
ಇಲ್ಲಿ ಸೋಮಶೇಖರ ನಾಯಕನ ಚಂಚಲತೆ ಬಗ್ಗೆ ಒಂದಿಷ್ಟು ಹೇಳಲೇಬೇಕು. ಆತ ಲೋಲುಪನಾಗಿದ್ದ. ವೇಶ್ಯೆಯೊಬ್ಬಳ ಸಹವಾಸಕ್ಕೆ ಬಿದ್ದು ರಾಜ್ಯವನ್ನು ಕಡೆಗಣಿಸಿಬಿಟ್ಟ. ಸದಾ ವೇಶ್ಯೆಯ ಮನೆಯಲ್ಲಿ ಮೈಮರೆಯುತ್ತಿದ್ದ ಅವನಿಗೆ ಅರಿವಿಲ್ಲದಂತೆ ವಿಷಪ್ರಾಶನ ಮಾಡಿಸಲಾಗುತ್ತಿರುತ್ತದೆ. ಕ್ರಮೇಣ ಆತ ಹುಚ್ಚನಂತಾಗುತ್ತಾನೆ. ಇದು ರಾಣಿ ಚೆನ್ನಮ್ಮಾಜಿಗೆ ಚಿಂತೆಗೀಡಾಗುವಂತೆ ಮಾಡುತ್ತದೆ. ರಾಜನ ಮಾನಸಿಕ ಸ್ಥಿತಿ ಸರಿ ಇಲ್ಲ ಅಂತ ಸುತ್ತಮುತ್ತಲಿನ ರಾಜರಿಗೆ ಗೊತ್ತಾದರೆ ಗತಿ ಏನು ಅಂತ ಚಿಂತಿಸುತ್ತಾಳೆ. ಆಕೆ ಅಂದುಕೊಂಡಂತೆ ಬಿಜಾಪುರದ ಸುಲ್ತಾನನ ಕಣ್ಣು ಬಿದನೂರಿನ ಮೇಲೆ ಬೀಳುತ್ತದೆ. ಸರ್ವಸನ್ನದ್ಧನಾದ ಬಿಜಾಪುರದ ಸುಲ್ತಾನ ಬಿದನೂರಿಗೆ ಮುತ್ತಿಗೆ ಹಾಕುತ್ತಿದ್ದಂತೆ ಮಂತ್ರಿಗಳು, ಸೇನಾನಾಯಕರು ಮಗುವೊಂದನ್ನು ದತ್ತು ತೆಗೆದುಕೊಂಡು ರಾಜ್ಯಭಾರ ಮಾಡುವಂತೆ ಚೆನ್ನಮ್ಮಾಜಿಗೆ ಸೂಚಿಸುತ್ತಾರೆ.ಆದ್ರೆ ಮಕ್ಕಳಿಲ್ಲದ ಚೆನ್ನಮ್ಮಾಜಿಗೆ ಮಂತ್ರಿಗಳ ಸಲಹೆ ರುಚಿಸಲಿಲ್ಲ. ಆಕೆ ನೇರವಾಗಿ ಪತಿ ಸೋಮಶೇಖರನ ಬಳಿಗೆ ಹೋಗಿ ರಾಜ್ಯದ ಮೇಲೆ ಸುಲ್ತಾನರ ದಬ್ಬಾಳಿಕೆ ನಡೆಯುತ್ತಿದೆ. ಬಂದು ಕಾಪಾಡು ಅಂತ ಪರಿಪರಿಯಾಗಿ ಬೇಡಿಕೊಳ್ಳುತ್ತಾಳೆ. ಆದ್ರೆ ಸೋಮಶೇಖರ ನಿರಾಕರಿಸುತ್ತಾನೆ. ಇದ್ಯಾಕೋ ಕಷ್ಟಕಾಲವೆಂದರಿತ ಚೆನ್ನಮ್ಮಾಜಿ ಮಾತುಕತೆಗೆ ಬಂದ ಸುಲ್ತಾನಿಗೆ ಮೂರು ಲಕ್ಷಕೊಟ್ಟು ತಕ್ಷಣಕ್ಕೆ ಆಗಬಹುದಾಗಿದ್ದ ಯುದ್ಧವನ್ನು ನಿಲ್ಲಿಸುತ್ತಾಳೆ. ಆದ್ರೆ ಮಾತುಕತೆಗೆ ಬಂದ ಸುಲ್ತಾನನ ದೂತ ಹೋಗುವಾಗ ಸೋಮಶೇಖರನನ್ನು ಕೊಲ್ಲಿಸುತ್ತಾನೆ. ಬಿದನೂರಿನ ಮೇಲೆ ಮುತ್ತಿಗೆಯನ್ನೂ ಹಾಕುತ್ತಾನೆ. ಹೆದರದ ಚೆನ್ನಮ್ಮಾಜಿ ತನ್ನ ಹಿತೈಷಿಗಳಾದ ಗುರುಬಸಪ್ಪದೇವ ಮತ್ತು ದಂಡನಾಯಕರಾದ ಕೃಷ್ಣಪ್ಪಯ್ಯ,ತಿಮ್ಮರಸಯ್ಯರ ಸಹಾಯದಿಂದ ವೈರಿಗಳನ್ನು ಸದೆ ಬಡಿದು ಕೆಳದಿ ಸಂಸ್ಥಾನವನ್ನು ಉಳಿಸಿಕೊಳ್ಳುತ್ತಾಳೆ. ೨೭ ಫೆಬ್ರವರಿ ೧೬೭೨ರಲ್ಲಿ ಕವಲೇದುರ್ಗದಲ್ಲಿ ಚೆನ್ನಮ್ಮಾಜಿಯ ಪಟ್ಟಾಭಿಷೇಕ ಮಹೋತ್ಸವ ನಡೆಯುತ್ತದೆ.
ಇಲ್ಲಿ ಒಂದು ವಿಷಯವನ್ನು ನಾವು ಪ್ರಸ್ತಾಪಿಸಬೇಕು. ಚೆನ್ನಮ್ಮಾಜಿಯ ಕಾಲಕ್ಕೆ ಸತಿಸಹಗಮನ ಪದ್ಧತಿ ಉತ್ತುಂಗದಲ್ಲಿತ್ತು. ಅಂದ್ರೆ ಪತಿ ಸತ್ತರೆ ಸತಿಯೂ ಬೆಂಕಿಯಲ್ಲಿ ಬಿದ್ದು ಸಾಯಬೇಕು. ಆದ್ರೆ ಸೋಮಶೇಖರನ ಸಾವಿನಿಂದ ತಾನೂ ಚಿತೆ ಏರಬೇಕಾಗಿ ಬಂದಾಗ ಅದನ್ನು ಚೆನ್ನಮ್ಮಾಜಿ ವಿರೋಧಿಸುತ್ತಾಳೆ. ಐದು ಜನ ಅತ್ತೆಯರು ಈ ಹಿಂದೆ ಸಹಗಮನ ಮಾಡಿದ್ದರೂ ಅರಮನೆಯ ಒಳಗೆ ಮತ್ತು ರಾಜ್ಯದ ಹೊರಗೆ ಅಪಾರ ಒತ್ತಡವಿದ್ದರೂ ತಾನು ರಾಜ್ಯಾಡಳಿತವನ್ನು ನಿಭಾಯಿಸುತ್ತೇನೆ ಅಂತ ಸವಾಲು ಎಸೆಯುತ್ತಾಳೆ. ಆ ಕಾಲಕ್ಕೆ ಚೆನ್ನಮ್ಮಾಜಿಯ ಈ ವಿರೋಧ ಕ್ರಾಂತಿಕಾರಕ ತೀರ್ಮಾನವೇ ಸರಿ. ಹೇಳಬೇಕೆಂದ್ರೆ ಸತಿಸಹಗಮನ ಪದ್ಧತಿಯನ್ನು ವಿರೋಧಿಸಿದ್ದ ರಾಜಾರಾಮ್ ಮೋಹನರಾಯರಿಗಿಂತ ನೂರು ವರ್ಷ ಮೊದಲೇ ಸತಿಸಹಗಮನದ ವಿರುದ್ಧ ದನಿ ಎತ್ತಿದ ದಿಟ್ಟೆ ಕೆಳದಿ ರಾಣಿ ಚೆನ್ನಮ್ಮಾಜಿ.
ಕೆಳದಿ ರಾಣಿ ಚೆನ್ನಮ್ಮಾಜಿ ಎಂಥ ರಾಜಕೀಯ ಚತುರೆ ಅನ್ನೋದಕ್ಕೆ ನಿಮಗೊಂದು ಉದಾಹರಣೆ ಹೇಳಬೇಕು. ಹಿಂದೂ ಹೃದಯ ಸಾಮ್ರಾಟನೆನಿಸಿದ ಛತ್ರಪತಿ ಶಿವಾಜಿಯ ಮೊದಲ ಮಗ ಸಾಂಭಾಜಿ ಕೊಲೆಯಾಗಿರುತ್ತಾನೆ. ಎರಡನೇ ಮಗ ರಾಜಾರಾಮ. ಅವನನ್ನೂ ಕೊಂದು ಮರಾಠ ಸಾಮ್ರಾಜ್ಯವನ್ನು ವಶಪಡಿಸಿಕೊಳ್ಳಲು ಔರಂಗಜೇಬ್ ಹವಣಿಸುತ್ತಿರುತ್ತಾನೆ. ಇದರಿಂದ ಹೆದರಿದ ರಾಜಾರಾಮ ಘೋರ್ಪಡೆ ಮಾಧವರಾಯರ ಆಣತಿಯ ಮೇರೆಗೆ ರಕ್ಷಣೆ ಕೋರಿ ಚೆನ್ನಮ್ಮಾಜಿಯ ಬಳಿಗೆ ಸನ್ಯಾಸಿ ವೇಷ ತೊಟ್ಟು ಬರುತ್ತಾನೆ. ಹಿಂದೂ ದೊರೆಗಳಾರೂ ರಾಜಾರಾಮನ ರಕ್ಷಣೆಗೆ ನಿಲ್ಲದಾದಾಗ ರಾಣಿ ಚೆನ್ನಮ್ಮಾಜಿ ನಾನು ನಿನ್ನನ್ನು ರಕ್ಷಿಸಿಸುತ್ತೇನೆ. ಕನ್ನಡಿಗರು ಕೊಟ್ಟ ಮಾತಿಗೆ ತಪ್ಪುವವರಲ್ಲ ಎನ್ನುವುದನ್ನು ನೆನಪಿಟ್ಟುಕೊ ಎನ್ನುವ ವಚನ ನೀಡುತ್ತಾಳೆ.
ಇತ್ತ ಔರಂಗಜೇಬನ ಸೈನ್ಯ ಕೆಳದಿಯ ಗಡಿಗೆ ಬಂದು ನಿಲ್ಲುತ್ತದೆ. ಆದರೇನು ಕೆಳದಿಯ ಹೆಣ್ಣುಲಿ ರಾಣಿ ಚೆನ್ನಮ್ಮಾಜಿ ಕಿಂಚಿತ್ತೂ ಹೆದರಲ್ಲ. ಔರಂಗಜೇಬನ ಸೈನ್ಯವನ್ನು ಕುಟ್ಟಿ ಪುಡಿಮಾಡುತ್ತಾಳೆ. ಸೋತ ಔರಂಗಜೇಬ ಮತ್ತು ಆತನ ಮಗ ಮೊಹಮ್ಮದ್ ಅಜಮ್ ಶಾ ಇಬ್ಬರೂ ರಾಣಿ ಚೆನ್ನಮ್ಮನ ಸೆರೆಯಾಳಾಗುತ್ತಾರೆ. ಇಬ್ಬರೂ ರಾಣಿಯ ಮುಂದೆ ಪ್ರಾಣಭಿಕ್ಷೆಗಾಗಿ ಅಂಗಲಾಚುತ್ತಾರೆ. ಚೆನ್ನಮ್ಮಾಜಿ ಮನಸ್ಸು ಮಾಡಿದ್ದರೇ ಅವರಿಬ್ಬರನ್ನೂ ಅಲ್ಲೇ ಕೊಂದು ಸೇಡುತೀರಿಸಿಕೊಳ್ಳಬಹುದಿತ್ತು. ವಾರಸುದಾರರಿಲ್ಲದ ಇಡೀ ಮೊಘಲ್ ಸಾಮ್ರಾಜ್ಯವನ್ನೇ ತನ್ನದಾಗಿಸಿಕೊಳ್ಳಬಹುದಿತ್ತು. ಆದರೆ ಕ್ಷಮಾಗುಣವುಳ್ಳ ಕೆಳದಿಯ ರಾಣಿ ಚೆನ್ನಮ್ಮ ಔರಂಗಜೇಬ ಮತ್ತು ಮಗ ಅಜಮ ಶಾ ರನ್ನು ಕ್ಷಮಿಸುತ್ತಾಳೆ. ಯಾಕೆಂದ್ರೆ ಒಬ್ಬ ಕನ್ನಡದ ತಾಯಿಗೆ ಜೀವ ಕೊಟ್ಟು ಗೊತ್ತೇ ವಿನಃ ಜೀವ ಪಡೆದು ಗೊತ್ತಿಲ್ಲ.
ಇಷ್ಟೆಲ್ಲಾ ನಡೆಯುವ ಮೊದಲೇ ರಾಜಾರಾಮನನ್ನು ಜಿಂಜಿಯ ಕೋಟೆಗೆ ಕಳುಹಿಸಿ ಅಲ್ಲಿ ರಾಜ್ಯಭಾರದ ವ್ಯವಸ್ಥೆ ಮಾಡಿರುತ್ತಾಳೆ ಕೆಳದಿಯ ರಾಣಿ ಚೆನ್ನಮ್ಮಾಜಿ. ಇದರ ಕೃತಾರ್ಥವಾಗಿಯೇ ರಾಜಾರಾಮನು ಕೆಳದಿಯ ಮೂರನೇ ರಾಜಧಾನಿ ಬಿದನೂರಿನಲ್ಲಿ ಪಾರ್ವತಿ ದೇವಸ್ಥಾನವನ್ನು ನಿರ್ಮಿಸುತ್ತಾನೆ.
ಕೆಳದಿಯ ರಾಣಿ ಚೆನ್ನಮ್ಮಾಜಿ ಕೇವಲ ಧೈರ್ಯವಂತೆ ಅಲ್ಲ. ಶೌರ್ಯವಂತೆಯೂ ಅಲ್ಲ. ಧಾರ್ಮಿಕವಾಗಿಯೂ ಸಾಮಾಜಿಕವಾಗಿಯೂ ಜನಪರ ನಿಲುವು ಹೊಂದಿದ್ದಳು. ಬಸವಾದಿ ಶರಣರ ವಚನ ಸಾಹಿತ್ಯವನ್ನು ಪಠಿಸುತ್ತಾ, ಪ್ರತಿ ನಿತ್ಯ ಇಷ್ಟಲಿಂಗ ಧ್ಯಾನ ಮಾಡುತ್ತಾ ಅಪ್ರತಿಮ ದಿವ್ಯಶಕ್ತಿ ಹೊಂದಿದ್ದಳು. ದಾಸೋಹವೇ ದೇವಧಾಮ ಎಂದುಕೊಂಡಿದ್ದಳು. ಹಾಗಾಗಿಯೇ ಶೃಂಗೇರಿ ಮಠಕ್ಕೆ ರಾಜಾಶ್ರಯ, ಅಗ್ರಹಾರ ಮತ್ತು ಜಂಗಮ ಮಠಗಳ ನಿರ್ಮಾಣ, ಸುಮಾರು ಎರಡು ಲಕ್ಷ ಜಂಗಮರಿಗೆ ದಾಸೋಹ ವ್ಯವಸ್ಥೆ, ರಾಜ್ಯದಲ್ಲಿ ಕೆರೆಕಟ್ಟೆಗಳ ನಿರ್ಮಾಣಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಳು. ಶೃಂಗೇರಿಗೆ ಚಿನ್ನದ ಗೋಪಾಲ ಕೃಷ್ಣ ಮತ್ತು ಸ್ಪಟಿಕ ಲಿಂಗ, ಕೊಲ್ಲೂರು ಮೂಕಾಂಬಿಕೆಗೆ ಪಚ್ಚೆ ಪದಕ, ಹೊರನಾಡು ಅನ್ನಪೂರ್ಣೆಗೆ ಕುಂಕುಮ ಸೇವೆ ಅಲ್ಲದೆ ವಿಜಯ ದಶಮಿಯಂದು ವಿಶೇಷ ಪೂಜೆಗೆ ಪ್ರೋತ್ಸಾಹ ನೀಡಿದ್ದಳು. ಬಹಳ ಮುಖ್ಯವಾದ ವಿಷಯವೆಂದರೆ ದತ್ತುಪುತ್ರನ ಸಮ್ಮುಖದಲ್ಲಿ ರಾಜ್ಯಾಡಳಿತ ನಡೆಸಬೇಕು ಅನ್ನುವ ನಿಯಮವಿದ್ದರೂ ಅದನ್ನು ಧಿಕ್ಕರಿಸಿ ಆಡಳಿತದ ಚುಕ್ಕಾಣಿ ಹಿಡಿದು ನಂತರ ಬಸಪ್ಪನೆಂಬ ದತ್ತುಪುತ್ರನನ್ನ ಪಡೆದುಕೊಂಡವಳು ರಾಣಿ ಚೆನ್ನಮ್ಮಾಜಿ. ಬಸಪ್ಪನಿಗೆ ಅತ್ಯದ್ಭುತವಾದ ಶಿಕ್ಷಣ ಕೊಡಿಸಿದಳು. ಮುಂದೆ ಆತನೇ ಬಸಪ್ಪನಾಯಕನೆಂದೂ ಬಸವಭೂಪಾಲನೆಂದು ಖ್ಯಾತಿ ಪಡೆದ. ಆತ ಬರೆದ ಗ್ರಂಥವೇ ಶಿವತತ್ವ ರತ್ನಾಕರ. ಅದೇ ಬೃಹತ್ ಸಂಸ್ಕೃತ ವಿಶ್ವಕೋಶ ಎಂದು ಖ್ಯಾತಿ ಪಡೆದಿದೆ.
ಅಂದ್ರೆ ೩೫೦ ವರ್ಷಗಳ ಹಿಂದೆ ಕೆಳದಿ ಸಾಮ್ರಾಜ್ಯವನ್ನು ಆಳಿದ ಕನ್ನಡತಿ ಅತ್ಯಂತ ಪ್ರಖರವಾದ ತೇಜಸ್ಸನ್ನು ಹೊಂದಿದ್ದಳು. ರಾಷ್ಟ್ರಧರ್ಮಕ್ಕೆ, ಸ್ವರಾಜ್ಯದ ಹೋರಾಟಕ್ಕೆ ಆಕೆ ಅದ್ಭುತ ಉದಾಹರಣೆಯಾಗಿ ನಮ್ಮ ಮುಂದೆ ನಿಲ್ಲುತ್ತಾಳೆ. ಅಂದು ಆಕೆ ರಾಣಿಯಾಗುವ ದಿಟ್ಟ ನಿರ್ಧಾರ ಮಾಡದಿದ್ದರೆ, ಶತ್ರುಪಾಳಯವನ್ನು ಬಗ್ಗು ಬಡಿಯದಿದ್ದರೆ, ಅಷ್ಟು ಧೈರ್ಯ ಸ್ಥೈರ್ಯ ಪ್ರದರ್ಶಿಸದಿದ್ದರೆ ಬಹುಶಃ ಕೆಳದಿ ಸಾಮ್ರಾಜ್ಯ ಸುಲ್ತಾನರ ಪಾಲಾಗುತ್ತಿತ್ತೇನೋ! ಆದರೆ ಎಲ್ಲವನ್ನೂ ಮೆಟ್ಟಿನಿಂತು ನಾಡಿನ ಕೀರ್ತಿ ಪತಾಕೆ ಹಾರಿಸಿ ಅಜರಾಮರವಾದವಳು ಕೆಳದಿಯ ರಾಣಿ ಚೆನ್ನಮ್ಮಾಜಿ.
ಈ ವರ್ಷ ರಾಣಿ ಚೆನ್ನಮ್ಮಾಜಿಯ ೩೫೦ನೇ ಪಟ್ಟಾಭಿಷೇಕ ವರ್ಷ.
ಆಕೆ ನಮಗೆಲ್ಲಾ ಸ್ಪೂರ್ತಿ. ದೇಶಕ್ಕೆ ಕೀರ್ತಿ ಎಂದು ಹೇಳಲು ನಮಗೆ ತುಂಬ ಹೆಮ್ಮೆ ಎನಿಸುತ್ತದೆ.
ಸರ್ಕಾರಕ್ಕೆ ಮನವಿ
೧. ಕೆಳದಿ ಮತ್ತು ಸಾಗರದ ಮಧ್ಯೆ ಒಂದು ಅಧ್ಯಯನ ಪೀಠ ಆಗಬೇಕು ಅದು ಕುವೆಂಪು ವಿಶ್ವವಿದ್ಯಾನಿಲಯದ ಅಡಿಯಲ್ಲಿ ಕಾರ್ಯನಿರ್ವಹಿಸಬೇಕು.
೨. ಪ್ರತಿವರ್ಷ ಫೆಬ್ರವರಿ ೨೭ನೇ ತಾರೀಖು ರಾಜ್ಯಾದ್ಯಂತ ಕೆಳದಿ ರಾಣಿ ಚೆನ್ನಮ್ಮಾಜಿ ಜಯಂತಿ ಆಚರಿಸಬೇಕು.
೩. ಕೆಳದಿ ಮತ್ತು ಮಹಾರಾಷ್ಟ್ರ ಸಂಬಂಧಪಟ್ಟ ಹಾಗೆ ಮರಾಠಿ ಮೋಡಿ ಲಿಪಿಯ ಬಗ್ಗೆ ಅದ್ಯಯನಕ್ಕೆ ಕ್ರಮ ಕೈಗೊಳ್ಳಬೇಕು.
೪. ಕೆಳದಿ ರಾಣಿ ಚೆನ್ನಮ್ಮಾಜಿಯ ಹೆಸರು ಶಿವಮೊಗ್ಗ ಏರ್ಪೋರ್ಟ್ಗೆ ಇಡಬೇಕು.
೫.ಕೆಳದಿ ಮತ್ತು ಕಾಶಿ ಸಂಬಂಧ ಕುರಿತು ಕಾಶಿಯಲ್ಲಿ ಒಂದು ಸ್ಮಾರಕ ನಿರ್ಮಾಣವಾಗಬೇಕು.
ಜಗದ್ಗುರು ಶ್ರೀಶ್ರೀಶ್ರೀ ವಚನಾನಂದ ಮಹಾಸ್ವಾಮಿಗಳು
ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ
ಹರಕ್ಷೇತ್ರ ಹರಿಹರ.